ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಜಮೀನ್ದಾರಿ ಪದ್ಧತಿ -
	ಬ್ರಿಟಿಷ್ ಭಾರತದಲ್ಲಿ ವ್ಯಾಪಕವಾಗಿ ಜಾರಿಯಲ್ಲಿದ್ದು, ಸ್ವತಂತ್ರ ಭಾರತದಲ್ಲೂ ಹಲವು ವರ್ಷಗಳ ಕಾಲ ವಿವಿಧ ರಾಜ್ಯಗಳಲ್ಲಿ ಮುಂದುವರಿದುಕೊಂಡು ಬಂದಿದ್ದ ಜಮೀನು ಹಿಡುವಳಿ ಪದ್ಧತಿಗಳಲ್ಲೊಂದು. ಒಂದು ಇಡೀ ಪ್ರದೇಶದ ಮೇಲೆ ನಿಗದಿಯಾದ ಕಂದಾಯವನ್ನು ಸಲ್ಲಿಸಲೊಪ್ಪಿ, ಪ್ರತಿಯಾಗಿ ಆ ಪ್ರದೇಶದ ರೈತರಿಂದ ಪ್ರತ್ಯೇಕವಾಗಿ ಕಂದಾಯ ವಸೂಲು ಮಾಡಿಕೊಳ್ಳಲು ಒಬ್ಬನಿಗೆ ಅಥವಾ ಜಂಟಿಯಾಗಿ ಕೆಲವು ಮಂದಿಗೆ ಸರ್ಕಾರ ನೀಡಿದ್ದ ಹಕ್ಕು. ಈ ಹಕ್ಕು ಪಡೆದ ವ್ಯಕ್ತಿ ಜಮೀನ್ದಾರ. ಆ ಪ್ರದೇಶದ ರೈತರೆಲ್ಲ ಜಮೀನ್ದಾರನಿಗೆ ಅಧೀನರಾಗಿರುತ್ತಿದ್ದರು. ಜಮೀನ್ದಾರಿ ಪದ್ಧತಿ ಒಂದೊಂದು ಕಡೆ ಒಂದೊಂದು ರೀತಿ ಇತ್ತಾದರೂ ಸ್ಥೂಲವಾಗಿ ಜಮೀನ್ದಾರಿ ಪದ್ಧತಿ ಒಂದೊಂದು ಕಡೆ ಒಂದೊಂದು ರೀತಿ ಇತ್ತಾದರೂ ಸ್ಥೂಲವಾಗಿ ಜಮೀನ್ದಾರಿ ಪದ್ಧತಿಗಳು ಲಕ್ಷಣ ಇದು.

	ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಸರ್ಕಾರಗಳು ರೈತರಿಂದ ಜಮೀನಿನ ಹುಟ್ಟುವಳಿಯಲ್ಲಿ ಒಂದು ಭಾಗವನ್ನು ಕಂದಾಯವಾಗಿ ಪಡೆಯುತ್ತ ಬಂದಿವೆ. ಮೊದಮೊದಲು ಒಟ್ಟು ಫಸಲಿನಲ್ಲಿ ಒಂದು ನಿಗದಿಯಾದ ಪಾಲನ್ನು ನೇರವಾಗಿ ಭೂಗಂದಾಯವಾಗಿ ಪಡೆಯಲಾಗುತ್ತಿತ್ತು. ಆದರೆ ಈ ಪದ್ಧತಿಯಲ್ಲಿ ಅನೇಕ ತೊಂದರೆಗಳಿದ್ದುವು. ಆದ್ದರಿಂದ ಇದರಲ್ಲಿ ಕ್ರಮೇಣ ಅನೇಕ ಸುಧಾರಣೆಗಳಾದುವು. ಸಾಗುವಳಿ ನೆಲವನ್ನು ಅಳತೆ ಮಾಡಿ, ಗುಣಕ್ಕೆ ಅನುಗುಣವಾಗಿ ಅದನ್ನು ಸ್ಥೂಲವಾಗಿ ನಾಲ್ಕು ದರ್ಜೆಗಳಾಗಿ ವಿಂಗಡಿಸಲಾಯಿತು.

	ಮೊಗಲ್ ಸಾಮ್ರಾಜ್ಯ ಉಚ್ಛ್ರಾಯಸ್ಥಿತಿಯಲ್ಲಿದ್ಧಾಗ ವ್ಯಾಪಕವಾಗಿ ಜಾರಿಯಲ್ಲಿದ್ದ ಈ ಪದ್ಧತಿ ಅನಂತರ ವಿಕೃತರೂಪಗಳನ್ನು ತಳೆಯಿತು. ಕ್ರಮೇಣ ಜಮೀನ್ದಾರಿ ಪದ್ಧತಿ ಹುಟ್ಟಿಕೊಂಡಿತು. ಮೊಗಲ್ ಸಾಮ್ರಾಜ್ಯ ಕ್ಷೀಣಿಸತೊಡಗಿದಾಗ ದೆಹಲಿಯ ಸರ್ಕಾರಕ್ಕೆ ತನ್ನ ಸಾಮ್ರಾಜ್ಯದ ದೂರ ಪ್ರಾಂತ್ಯಗಳಲ್ಲಿದ್ದ ಕಂದಾಯ ವಸೂಲಿ ಅಧಿಕಾರಿಗಳ ಮೇಲೆ ಸರಿಯಾದ ಹತೋಟಿ ಇಟ್ಟುಕೊಳ್ಳುವುದು ಸಾಧ್ಯವಾಗದೆ ಹೋಯಿತು. ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವರಮಾನ ತಪ್ಪದಂತೆ ಯಾವುದಾದರೊಂದು ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದು ಅಗತ್ಯವೆನಿಸಿತು. ಫರೂಕ್‍ಸಿಯಾರನ ಆಳ್ವಿಕೆಯ ಕಾಲದಲ್ಲಿ (1713-19) ಜಮೀನ್ದಾರಿ ಪದ್ಧತಿ ಖಚಿತವಾಗಿ ರೂಪುಗೊಂಡಿತೆನ್ನಬಹುದು. ಪ್ರತಿಯೊಂದು ಜಿಲ್ಲೆ ಅಥವಾ ಪರಗಣದಲ್ಲೂ ಆಢ್ಯನಾದ ರೈತನೊಬ್ಬ ಆ ಸುತ್ತಿನ ಎಲ್ಲ ರೈತರಿಂದ ಕಂದಾಯ ವಸೂಲು ಮಾಡಿ, ಒಟ್ಟು ವಸೂಲಿಯ ಮೊಬಲಗಿನಲ್ಲಿ ಹತ್ತನೆಯ ಒಂಬತ್ತು ಭಾಗವನ್ನು ಸರ್ಕಾರಕ್ಕೆ ಸಲ್ಲಿಸಿ, ಉಳಿದ ಒಂದು ಭಾಗವನ್ನು ತನಗೆ ಸಂಭಾವನೆಯಾಗಿ ಉಳಿಸಿಕೊಳ್ಳುವ ಪದ್ಧತಿ ರೂಪುಗೊಂಡಿತು.

	ವಸೂಲಿಯ ಶ್ರಮವಿಲ್ಲದೆ ಒಟ್ಟೊಟ್ಟಾಗಿ ಕಂದಾಯ ಪಡೆಯುವುದು ಸಾಧ್ಯವೆನಿಸಿದಾಗ ಸರ್ಕಾರ ಈ ಪರಿಸ್ಥಿತಿಯ ದುರುಪಯೋಗ ಪಡೆದುಕೊಳ್ಳಲು ಕ್ರಮ ತೆಗೆದುಕೊಂಡಿತು. ಪ್ರತಿಯೊಂದು ಪರಗಣದ ಕಂದಾಯ ವಸೂಲಿ ಹಕ್ಕನ್ನೂ ಹರಾಜು ಮಾಡಿ, ಅತಿ ಹೆಚ್ಚಿನ ಬಿಡ್ಡುದಾರನಿಗೆ ಅದನ್ನು ನೀಡಲಾರಂಭಿಸಿದ್ದು ಮುಂದಿನ ಮಜಲು. ಈ ಹಕ್ಕು ಪಡೆದವನು ಸರ್ಕಾರಕ್ಕೆ ಒಂದು ಗಂಟಿನಲ್ಲಿ ಬಿಡ್ಡಿನ ಮೊಬಲಗನ್ನು ಪಾವತಿ ಮಾಡಿ, ಇದಕ್ಕಿಂತ ಹೆಚ್ಚಿಗೆಯಾಗಿ ವಸೂಲಾದ ಮೊಬಲಗನ್ನು ತಾನೇ ಉಳಿಸಿಕೊಳ್ಳುಬಹುದಿತ್ತು. ಇಂಥ ಹಕ್ಕುದಾರರು ರೈತರನ್ನು ಅತಿಯಾಗಿ ಶೋಷಿಸುತ್ತಿದ್ದರು. ಸರ್ಕಾರಕ್ಕೆ ಆದಷ್ಟು ಕಡಿಮೆ ಪಾವತಿ ಮಾಡಲು ಯತ್ನಿಸುತ್ತಿದ್ದರು. ಮೊಗಲರಿಗೆ ಮಣಿಯಬೇಕಾಗಿ ಬಂದ ಅನೇಕ ಹಿಂದೂ ದೊರೆಗಳು ಕೇವಲ ಕಂದಾಯ ವಸೂಲಿ ಹಕ್ಕುದಾರರಾಗಬೇಕಾಗಿ ಬಂದದ್ದೂ ಉಂಟು. ಆರಂಭದೆಸೆಯಲ್ಲಿ ಇದು ವಂಶಪಾರಂಪರ್ಯವಾದ ಹಕ್ಕಾಗಿರಲಿಲ್ಲವಾದರೂ ಕೇಂದ್ರಾಧಿಕಾರ ಸಡಿಲವಾದಂತೆ ಇದು ಅನುವಂಶಿಕವಾಯಿತು. ದೇಶದಲ್ಲಿ ಪ್ರಕ್ಷುಬ್ಧ ರಾಜಕೀಯ ಪರಿಸ್ಥಿತಿ ಉಂಟಾದಾಗ ಕಂದಾಯ ವಸೂಲಿ ಹಕ್ಕುದಾರನ ಸ್ಥಿತಿ ಭದ್ರವಾಯಿತು. ತನ್ನ ಹಕ್ಕಿಗೆ ಒಳಪಟ್ಟಿದ್ದ ಪ್ರದೇಶಕ್ಕೆಲ್ಲ ತಾನೇ ಮಾಲೀಕನೆಂಬಂತೆ ಅವನು ವರ್ತಿಸತೊಡಗಿದ. ತನ್ನ ಸ್ವಂತ ಜಮೀನಿನ ಜೊತೆಗೆ ಅಲ್ಲಿಯ ಪಾಳುನೆಲವನ್ನೆಲ್ಲ ಅವನು ಸಾಗುವಳಿ ಮಾಡತೊಡಗಿದ. ನಾನಾ ಉಪಾಯಗಳಿಂದ ಇತರ ರೈತರ ಜಮೀನುಗಳನ್ನೂ ಕೊಂಡುಕೊಳ್ಳಲಾರಂಭಿಸಿದ. ಲಾರ್ಡ್ ಕಾರ್ನ್‍ವಾಲಿಸ್ ಭಾರತದ ಗವರ್ನರ್-ಜನರಲ್ ಆಗುವ ವೇಳೆಗೆ (1786) ಅಂತ್ಯದಶೆಯಲ್ಲಿದ್ದ ಮೊಗಲ್ ಪ್ರಭುತ್ವಕ್ಕೆ ಏಕೈಕ ಧನ ಮೂಲಗಳಾಗಿದ್ದ ಈ ಹಕ್ಕುದಾರರು, ಜಮೀನ್ದಾರರು, ಆರ್ಥಿಕವಾಗಿ ತುಂಬ ಬಲಿಷ್ಠರಾಗಿ ಪರಿಣಮಿಸಿದ್ದರು. ಸಂಪೂರ್ಣ ಮಾಲೀಕರಂತೆಯೇ ಆಗಿದ್ದರು ; ಪ್ರಭುಗಳಾಗಿದ್ದರು. ಭೂಗಂದಾಯ ಆಡಳಿತ ವ್ಯವಸ್ಥೆಯೇ ಇಲ್ಲವಾಗಿದ್ದದ್ದರಿಂದ ಇವರ ಚಟುವಟಿಕೆಗಳಿಗೆ ಯಾವ ನಿರ್ಬಂಧವೂ ಇಲ್ಲದೆ, ಜಮೀನ್ದಾರರಿಂದ ರೈತರ ಸುಲಿಗೆ ಅಬಾಧಿತವಾಗಿ ಸಾಗಿತ್ತು.

	ಮೊಗಲ್ ಸಾಮ್ರಾಜ್ಯಕ್ಕೆ, ಅದರಲ್ಲೂ ಬಂಗಾಲ ಪ್ರಾಂತ್ಯಕ್ಕೆ, ಸೀಮಿತವಾಗಿದ್ದ ಈ ಪದ್ಧತಿ ಕ್ರಮೇಣ ದೇಶದ ಇತರ ಭಾಗಗಳಿಗೂ ಹಬ್ಬಿತು. ಆ ಕಡೆಗಳಲ್ಲೂ ಆಡಳಿತ ಶಿಥಿಲವಾದ್ದೇ ಇದಕ್ಕೆ ಕಾರಣ. ಆದರೆ ಇದು ಎಲ್ಲ ಕಡೆಗಳಲ್ಲೂ ಒಂದೇ ರೀತಿಯಾಗಿರಲಿಲ್ಲ. ಉತ್ತರ ಭಾರತದಲ್ಲಿ ಈ ಪದ್ಧತಿ ಮೊದಲು ಜಾರಿಗೆ ಬಂದದ್ದರಿಂದಲೂ ಅಲ್ಲಿ ಕೇಂದ್ರಾಡಳಿತ ಬಲು ಬೇಗ ದುರ್ಬಲವಾದ್ದರಿಂದಲೂ ಭಾರತದ ಆ ಭಾಗದಲ್ಲಿ ಜಮೀನ್ದಾರಿ ಪದ್ಧತಿ ಹೆಚ್ಚಾಗಿ ಬೆಳೆಯಿತು. ಬಂಗಾಲದಲ್ಲಿ ಈ ಹಕ್ಕುಗಳು ದೃಢವಾಗಿ ಬೇರೂರಿದುವು. ದಕ್ಷಿಣ ಭಾರತದಲ್ಲಿ ಈ ಪದ್ಧತಿ ಹೆಚ್ಚು ಸ್ಥಿರವಾಗಲಿಲ್ಲ. ಕೊಂಕಣದಲ್ಲಿ ಮಾತ್ರ ಖೋಟರು ಜಮೀನ್ದಾರಿ ಹಕ್ಕುಗಳನ್ನು ಪಡೆದುಕೊಂಡರು. ಸಂಯುಕ್ತ ಪ್ರಾಂತ್ಯಗಳಲ್ಲಿ (ಈಗಿನ ಉತ್ತರ ಪ್ರದೇಶ) ಜಮೀನ್ದಾರರು ಕೆಲವು ಭೂಒಡೆತನ ಹಕ್ಕುಗಳನ್ನು ಪಡೆದುಕೊಂಡರು. ಪಂಜಾಬಿನಲ್ಲೂ ಈ ಪದ್ಧತಿ ಇದೇ ರೀತಿ ಬೆಳೆಯಿತು. ಈ ಪರಿಸ್ಥಿತಿಯಲ್ಲಿ ಬ್ರಿಟಿಷರು ಭಾರತದಲ್ಲಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದರು.

	ಇಂಗ್ಲಿಷ್ ಈಸ್ಟ್ ಇಂಡಿಯ ಕಂಪನಿಯ ಆಡಳಿತದ ಆರಂಭ ಕಾಲದಲ್ಲಿ ಪರಿಸ್ಥಿತಿ ಇನ್ನೂ ಹದಗೆಟ್ಟಿತು. ಕ್ಲೈವ್ ಜಾರಿಗೆ ತಂದ ದ್ವಿಮುಖ ಆಡಳಿತ ಪದ್ಧತಿಯೂ ಇದಕ್ಕೆ ಸಹಾಯ ಮಾಡಿತು. ಬಂಗಾಲದಲ್ಲಿದ್ದ ನವಾಬನ ಕಂದಾಯ ವಸೂಲಿ ಅಧಿಕಾರಿಗಳಾಗಲಿ ಕಂಪನಿಯ ನೌಕರರಾಗಲಿ ಸುರಾಜ್ಯಭಾರದ ಕಡೆಗೆ ಲಕ್ಷ್ಯ ಕೊಡಲಿಲ್ಲ. ತತ್ಫಲವಾಗಿ ಜನರು ಹಿಂಸೆಗೆ ಒಳಗಾದರು. ಎರಡೂ ಕಡೆಗಳಿಂದ ಅವರು ಶೋಷಣೆಗೆ ಒಳಗಾಗಿದ್ದರು. ಆದರೆ ಅವರ ಹಿತವನ್ನು ರಕ್ಷಿಸುವವರು ಮಾತ್ರ ಯಾರೂ ಇರಲಿಲ್ಲ ಜಮೀನ್ದಾರರ ಸುಲಿಗೆಯಿಂದ ರೈತರನ್ನು ರಕ್ಷಿಸಬೇಕೆಂಬ ಉದ್ದೇಶದಿಂದ ಕಂದಾಯ ಮೇಲ್ವಿಚಾರಣೆಗಾಗಿ 1769ರಲ್ಲಿ ನೇಮಕವಾದ ಅಧಿಕಾರಿಗಳು ಚಿಕ್ಕ ವಯಸ್ಸಿನವರೂ ಅನನುಭವಿಗಳೂ ಆಗಿದ್ದುದರಿಂದ ಅವರು ಏನೂ ಮಾಡಲಾಗಲಿಲ್ಲ. ಜಮೀನಿಗೆ ಸಂಬಂಧಿಸಿದ ವಿವರಗಳೆಲ್ಲ ಜಮೀನ್ದಾರರ ವಶದಲ್ಲಿದ್ದುವು. ಅವರು ಅಧಿಕಾರಿಗಳಿಗೆ ಆ ವಿವರಗಳನ್ನು ನೀಡಲಿಲ್ಲ. 1770ರಲ್ಲಿ ಸಂಭವಿಸಿದ ಕ್ಷಾಮದಿಂದ ಜನರ ಕಷ್ಟ ಇನ್ನೂ ಹೆಚ್ಚಿತು. ಕಂಪನಿಯ ನಿರ್ದೇಶಕರಿಗೆ ಆಗ ಗಂಭೀರ ಪರಿಸ್ಥಿತಿಯ ಅರಿವು ಉಂಟಾಯಿತು. ಕಂದಾಯ ಆಡಳಿತದ ನೇರ ನಿರ್ವಹಣೆಯನ್ನು ವಹಿಸಿಕೊಳ್ಳಬೇಕೆಂದು ಅವರು 1772ರಲ್ಲಿ ವಾರೆನ್ ಹೇಸ್ಟಿಂಗ್ಸನಿಗೆ ಆದೇಶ ನೀಡಿದರು. ಅವನು ಕಂದಾಯ ವಸೂಲಿಗಾಗಿ ವ್ಯವಸ್ಥೆಯೊಂದನ್ನು ನಿರ್ಮಿಸಿದನಾದರೂ ಹೆಚ್ಚು ಹಣ ಸಂಪಾದನೆಯ ಉದ್ದೇಶದಿಂದ ಹಳೆಯ ಜಮೀನ್ದಾರರನ್ನು ತಳ್ಳಿಹಾಕಿ, ಕಂದಾಯ ವಸೂಲಿ ಹಕ್ಕುಗಳನ್ನು ಹರಾಜು ಮೂಲಕ ಏರ್ಪಾಟು ಮಾಡಿದ. ಇದರಿಂದ ಜನರಿಗೆ ಬಹಳ ತೊಂದರೆಯಾಯಿತು.

	ಈ ಸಮಯದಲ್ಲಿ ಲಾರ್ಡ್ ಕಾರ್ನ್‍ವಾಲಿಸ್ ಬಂದ (1786). ಅವನ ಅತ್ಯಂತ ಮುಖ್ಯ ಕ್ರಮವೆಂದರೆ ಬಂಗಾಲದ ಖಾಯಂ ಭೂಗಂದಾಯ ವ್ಯವಸ್ಥೆ ಅಥವಾ ಶಿಸ್ತು. ಮೂರು ವರ್ಷಗಳ ಕಾಲ ಕೂಲಂಕಷ ವಿಚಾರಣೆ ನಡೆಸಿದ ಮೇಲೆ ಇದನ್ನು ಜಾರಿಗೆ ತರಲಾಯಿತು. ಜಮೀನ್ದಾರರ ಕಂದಾಯ ವಸೂಲಿ ಅಧಿಕಾರ ವ್ಯಾಪ್ತಿಗೆ ಒಳಪಟ್ಟ ಪ್ರದೇಶಕ್ಕೆ ಆಯಾ ಜಮೀನ್ದಾರರೇ ಸಂಪೂರ್ಣ ಒಡೆಯರೆಂದು ಘೋಷಿಸಿ ಜಮೀನ್ದಾರರ ಸ್ಥಾನವನ್ನು ಕಾನೂನಬದ್ಧಗೊಳಿಸಲಾಯಿತು. ಜಮೀನ್ದಾರರು ಹೆಚ್ಚು ಆಸಕ್ತಿ ವಹಿಸಿ ವಸೂಲಿ ಕ್ರಮ ಕೈಗೊಂಡು ಸರ್ಕಾರಕ್ಕೆ ಸಲ್ಲಬೇಕಾದ ಕಂದಾಯವನ್ನು ಪಾವತಿ ಮಾಡುವರೆಂಬುದು ಇದರ ಹಿಂದೆ ಇದ್ದ ಆಶಯ. ಬಾಕಿದಾರರಾದ ಜಮೀನ್ದಾರರ ಜಮೀನನ್ನು ವಿಕ್ರಯ ಮಾಡುವ ಅಧಿಕಾರವನ್ನು ಸರ್ಕಾರ ಉಳಿಸಿಕೊಂಡಿತು. 1793ರಲ್ಲಿ ಈ ವ್ಯವಸ್ಥೆಯನ್ನು ಖಾಯಂ ಮಾಡಲಾಯಿತು.

	ಬಂಗಾಲದ 1793ರ ಖಾಯಂ ಕಂದಾಯ ವ್ಯವಸ್ಥೆಯಲ್ಲಿ ಅನೇಕ ದೋಷಗಳಿದ್ದುವು. ಕೂಲಂಕುಷ ಸರ್ವೆ, ನೆಲದ ವರ್ಗೀಕರಣ, ಹಕ್ಕುಗಳ ದಾಖಲೆಯ ಸ್ಥಾಪನೆ ಮುಂತಾದ ಕ್ರಮಗಳನ್ನು ಕೈಗೊಳ್ಳದೆ ಮಾಡಲಾದ ಈ ವ್ಯವಸ್ಥೆ ತುಂಬ ಯಾದೃಚ್ಛಿಕವಾದ್ದೆಂದೂ ರೈತರ ಜಮೀನುಗಳ ವೈಯಕ್ತಿಕ ಒಡೆತನವೇ ಮುಂತಾದ ಹಿತಗಳ ರಕ್ಷಣೆ ಆದಂತಾಗಲಿಲ್ಲವೆಂದೂ ಅವರು ಅನೇಕ ವೇಳೆ ಅತ್ಯಂತ ಹೆಚ್ಚಿನ ಕಂದಾಯ ಕೊಡಬೇಕಾಗಿ ಬರುವುದೆಂದೂ ಅವರಿಗೆ ಭದ್ರತೆ ಇಲ್ಲದಂತಾಗಿ ಉತ್ಪಾದನೆ ಕ್ಷೀಣಿಸುವುದೆಂದೂ ವಾದಿಸಲಾಯಿತಾದರೂ ಮುಂದಿನ ಸುಮಾರು ಎಪ್ಪತ್ತೈದು ವರ್ಷಗಳ ಕಾಲ ರೈತರಿಗೆ ಯಾವ ರಕ್ಷಣೆಯೂ ದೊರಕಲಿಲ್ಲ. ಬಂಗಾಲದ ಮಾದರಿಯನ್ನು ಇತರ ಪ್ರದೇಶಗಳಿಗೂ ವಿಸ್ತರಿಸಲು ಯತ್ನಿಸಲಾಯಿತು. ಸಂಯುಕ್ತ ಪ್ರಾಂತ್ಯಗಳು, ಮಧ್ಯ ಪ್ರಾಂತ್ಯ, ಪಂಜಾಬ್, ಅಸ್ಸಾಂ, ಬಿಹಾರ, ಒರಿಸ್ಸ, ಬೊಂಬಾಯಿ ಮುಂತಾದ ಅನೇಕ ಪ್ರಾಂತ್ಯಗಳಲ್ಲಿ ಕಂದಾಯ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಯತ್ನಗಳಾದುವು.

	ನಿವಾರಣೆಯ ಕ್ರಮಗಳು : ಭಾರತಕ್ಕೆ ಸ್ವಾತಂತ್ರ್ಯ ಬರುವುದಕ್ಕೆ ಪೂರ್ವದಲ್ಲಿ ಜಮೀನ್ದಾರಿ ಮತ್ತು ಇಂಥ ಇತರ ದೋಷಪೂರ್ಣ ಜಮೀನು ಹಿಡುವಳಿ ವ್ಯವಸ್ಥೆಗಳನ್ನು ನಿವಾರಿಸಲು ತೀವ್ರವಾದ ಕ್ರಮಗಳೇನೂ ಜಾರಿಗೆ ಬರಲಿಲ್ಲ. 1947ರ ಅನಂತರ ಭಾರತದ ನಾನಾ ರಾಜ್ಯ ಸರ್ಕಾರಗಳು ಜಮೀನ್ದಾರಿ ಮತ್ತು ಇತರ ಹಕ್ಕುಗಳನ್ನು ತೊಡೆದು ಹಾಕಲು ಅಧಿನಿಯಮಗಳನ್ನು ಜಾರಿಗೆ ತಂದಿವೆ. ತತ್ಫಲವಾಗಿ ಜಮೀನ್ದಾರಿ ಪದ್ಧತಿ ಇಂದು ಭಾರತದಲ್ಲಿ ಸಂಪೂರ್ಣವಾಗಿ ಇಲ್ಲವಾಗಿದೆ.

	ಜಮೀನ್ದಾರಿ ಪದ್ಧತಿಯನ್ನು ತೊಡೆದು ಹಾಕಲು ನೀಡಲಾದ ಮುಖ್ಯವಾದ ಕಾರಣಗಳಿವು : 1 ಜಮೀನ್ದಾರ ಪರೋಪಜೀವಿ. ತನ್ನ ಅಧೀನದಲ್ಲಿರುವ ಜಮೀನನ್ನು ಅಭಿವೃದ್ಧಿ ಪಡಿಸಲು ಅವನು ಏನೂ ಕ್ರಮ ಕೈಗೊಳ್ಳಲಿಲ್ಲ. ಉಳುವ ರೈತನಿಗೂ ಸರ್ಕಾರಕ್ಕೂ ನಡುವೆ ಇರುವ ಈತ ಸಣ್ಣ ಜಮೀನುಗಳ ಸಮೇಕನ (ಕನ್ಸಾಲಿಡೇಷನ್) ಪ್ರಕ್ರಿಯೆಗೆ ಭಾರಿ ಅಡ್ಡಿ. ಜಮೀನಿನ ಅಭಿವೃದ್ಧಿ, ಆಹಾರೋತ್ಪಾದನೆಯಲ್ಲಿ ಹೆಚ್ಚಳ ಸಾಧನೆ, ಭೂ ಸುಧಾರಣೆ-ಇವನ್ನು ಜಮೀನ್ದಾರಿ ಪದ್ಧತಿಯನ್ನು ತೊಡೆದು ಹಾಕದೆ ಸಾಧಿಸಲಾಗುವುದಿಲ್ಲ. 2 ಜಮೀನ್ದಾರಿ ಪದ್ಧತಿಯನ್ನು ತೊಡೆದು ಹಾಕುವುದರಿಂದ ಸರ್ಕಾರಕ್ಕೆ ಭೂಗಂದಾಯದಿಂದ ಬರುವ ವರಮಾನ ಅಧಿಕವಾಗುತ್ತದೆ. ಜಮೀನ್ದಾರರ ಪಾಲೂ ಸರ್ಕಾರಕ್ಕೆ ಸಂದಾಯವಾಗುತ್ತದೆ-ಎಂಬುದು ಇನ್ನೊಂದು ವಾದ. ಈ ವಾದ ಸುಳ್ಳಾಗಲಿಲ್ಲ. ಜಮೀನ್ದಾರಿ ಪದ್ಧತಿಯನ್ನು ರದ್ದು ಮಾಡುವ ಕ್ರಮ ಕೈಗೊಂಡ ಮೇಲೆ ಭೂಗಂದಾಯದಿಂದ ರಾಜ್ಯ ಸರ್ಕಾರಗಳ ವರಮಾನ ಇಮ್ಮಡಿಸಿತು. ಈ ಅಧಿಕ ವರಮಾನದಿಂದ ರಾಜ್ಯ ಸರ್ಕಾರಗಳಿಗೆ ಭೂ ಅಭಿವೃದ್ಧಿ ಹಾಗೂ ಭೂ ಸುಧಾರಣೆಗೆ ಹೆಚ್ಚು ಹಣ ಒದಗುವಂತಾಯಿತು. 3 ಜಮೀನ್ದಾರಿ ಪದ್ಧತಿಯ ನಿವಾರಣೆ ಕೇವಲ ಆರ್ಥಿಕ ಕ್ರಮವಲ್ಲ. ಅದು ರಾಜಕೀಯ ಕ್ರಮ ಕೂಡ. ಪ್ರಜಾಪ್ರಭುತ್ವ ಭಾರತದಲ್ಲಿ ಬಹುತೇಕ ಮತದಾರರು ಸಣ್ಣಪುಟ್ಟ ರೈತರು. ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಮೂಡುವಂತೆ ಮಾಡಲು ಅವರ ಸ್ಥಿತಿಯನ್ನು ಉತ್ತಮಪಡಿಸುವುದು ಅತ್ಯವಶ್ಯ.

	ಜಮೀನ್ದಾರಿ ಪದ್ಧತಿಯನ್ನು ರದ್ದುಪಡಿಸಬಾರದೆಂಬುದಕ್ಕೂ ಅನೇಕ ಕಾರಣಗಳನ್ನೂ ನೀಡಬಹುದಾಗಿತ್ತು : 1 ಜಮೀನ್ದಾರಿ ಪದ್ಧತಿಯ ರದ್ದಿನಿಂದ ಈ ಪದ್ಧತಿಯನ್ನೇ ಆಶ್ರಯಿಸಿದ ಅನೇಕರು ನಿರುದ್ಯೋಗಿಗಳಾಗುವರೆಂಬುದು ಒಂದು ವಾದ. ಆದರೆ ಅದರ ರದ್ದಿನಿಂದ ಒಟ್ಟಿನಲ್ಲಿ ಹಲವರಿಗೆ ಲಭ್ಯವಾಗುವ ಅನುಕೂಲದ ದೃಷ್ಟಿಯಿಂದ ಕೆಲವೇ ಮಂದಿಗೆ ಆಗುವ ಈ ತೊಂದರೆಂiÀiನ್ನು ಪರಿಗಣಿಸಬೇಕಾಗಿಲ್ಲವೆಂಬುದು ಇದಕ್ಕೆ ಉತ್ತರ. 2 ಜಮೀನ್ದಾರಿ ಪದ್ಧತಿಯ ರದ್ದಿನಿಂದ ರೈತನಿಗೂ ತೊಂದರೆಯಾಗುವುದೆಂದು ವಾದಿಸಲಾಗಿತ್ತು. ಅವನಿಗೆ ಜಮೀನ್ದಾರನಿಂದ ಧನಸಹಾಯ ಲಭ್ಯವಾಗುತ್ತಿತ್ತು. ಜಮೀನ್ದಾರ ಇಲ್ಲವಾದಾಗ ಇದು ಅವನಿಗೆ ದೊರಕದೆಂದೂ ಸರ್ಕಾರ, ಸಹಕಾರ ಮತ್ತು ಇತರ ಉದ್ದರಿ ವ್ಯವಸ್ಥೆಗಳು ರೈತನಿಗೆ ನೆರವು ನೀಡಲು ಅವುಗಳೇ ರಚಿಸಿಕೊಂಡ ಅನೇಕ ನಿಬಂಧನೆಗಳು ಅಡ್ಡ ಬರುವುದೆಂದೂ ಹೇಳಲಾಗಿತ್ತು. ಆದರೆ ಗ್ರಾಮ ಪ್ರದೇಶದ ಯಾವುದೇ ಸುಧಾರಣೆ ಸಾಧಿಸುವ ಮುನ್ನ ಅತ್ಯಂತ ಕ್ರೂರವಾದ ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಮಾಡುವುದು ಅನಿವಾರ್ಯವೆಂಬುದರಲ್ಲಿ ಸಂದೇಹವಿರಲಿಲ್ಲ.

	ಉತ್ತರ ಪ್ರದೇಶ, ಮಧ್ಯ ಪ್ರದೇಶ ಮುಂತಾದ, ಹಂಗಾಮಿ ಕಂದಾಯ ವ್ಯವಸ್ಥೆಯಿದ್ದ, ರಾಜ್ಯಗಳಲ್ಲಿ ಜಮೀನ್ದಾರಿ ಪದ್ಧತಿಯನ್ನು ರದ್ದುಮಾಡುವುದು ಹೆಚ್ಚು ಕಷ್ಟವಾಗಲಿಲ್ಲ. ಏಕೆಂದರೆ ಅಲ್ಲಿ ಸಾಕಷ್ಟು ದಾಖಲೆಗಳೂ ಕಂದಾಯ ಆಡಳಿತ ಯಂತ್ರವೂ ಲಭ್ಯವಿದ್ದುವು. ಬಿಹಾರ, ಒರಿಸ್ಸ, ಪಶ್ಚಿಮ ಬಂಗಾಲ ರಾಜ್ಯಗಳ ವಿಚಾರ ಹಾಗಲ್ಲ. ಖಾಯಂ ಕಂದಾಯ ವ್ಯವಸ್ಥೆ ಇದ್ದ ಆ ರಾಜ್ಯಗಳಲ್ಲೂ ಜಾಗೀರ್‍ದಾರಿ ವ್ಯವಸ್ಥೆ ಇದ್ದ ರಾಜಸ್ಥಾನ, ಸೌರಾಷ್ಟ್ರ ರಾಜ್ಯಗಳಲ್ಲೂ ಜಮೀನುಗಳನ್ನು ಕುರಿತ ದಾಖಲೆಗಳನ್ನೂ ಕಂದಾಯ ವ್ಯವಸ್ಥೆಯನ್ನೂ ಹೊಸದಾಗಿ ರಚಿಸಬೇಕಾಗಿ ಬಂತು. ಅಂತೂ ಎಲ್ಲ ರಾಜ್ಯಗಳಲ್ಲೂ ಸರ್ಕಾರಕ್ಕೂ ರೈತನಿಗೂ ನಡುವಣ ಹಿಡುವಳಿಗಳನ್ನು ರದ್ದುಮಾಡುವ ಕಾನೂನುಗಳು ಜಾರಿಗೆ ಬಂದುವು.

	ಜಮೀನ್ದಾರಿ ಪದ್ಧತಿಯ ರದ್ದಿಗಾಗಿ ಸ್ಥೂಲವಾಗಿ ಈ ರೀತಿ ಕ್ರಮ ಕೈಗೊಳ್ಳಲಾಯಿತು : 1 ಪಾಳು ನೆಲ. ಅರಣ್ಯ ಆಬಾದಿ ನೆಲ ಮುಂತಾದ-ಜಮೀನ್ದಾರರೇ ಮುಂತಾದ ಮಧ್ಯವರ್ತಿಗಳಿಗೆ ಸೇರಿದ್ದ-ಒಟ್ಟಿನ ನೆಲದ ವ್ಯವಸ್ಥೆ ಮತ್ತು ಅಭಿವೃದ್ಧಿಗಾಗಿ ಅವನ್ನು ಸರ್ಕಾರವೇ ವಹಿಸಿಕೊಂಡಿತು. 2 ಹಿತ್ತಲು, ಮಧ್ಯವರ್ತಿಗಳು ಖುದ್ದಾಗಿ ಸಾಗುವಳಿ ಮಾಡುತ್ತಿದ್ದ ಜಮೀನು ಮುಂತಾದವನ್ನು ಅವರ ವಶದಲ್ಲೇ ಇರಗೊಡಲಾಯಿತು. 3 ಬಹುತೇಕ ಎಲ್ಲ ರಾಜ್ಯಗಳಲ್ಲೂ ಮುಖ್ಯ ಗೇಣಿದಾರರಿಗೂ ಸರ್ಕಾರಕ್ಕೂ ನೇರಸಂಬಂಧ ಏರ್ಪಡಿಸಲಾಯಿತು. ಕೆಲವು ರಾಜ್ಯಗಳಲ್ಲಿ ಮುಖ್ಯ ಗೇಣಿದಾರರಿಗೆ ನೆಲದಲ್ಲಿ ಖಾಯಂ ಹಾಗೂ ವರ್ಗ ಮಾಡುವ ಹಕ್ಕುಗಳಿದ್ದದ್ದರಿಂದ ಅಲ್ಲಿ ಹೊಸದಾಗಿ ಸಂಬಂಧ ಏರ್ಪಡಿಸಬೇಕಾಗಿದ್ದಿರಲಿಲ್ಲ.

	ಜಮೀನ್ದಾರಿ ಪದ್ಧತಿಯನ್ನು ರದ್ದು ಮಾಡಿದ್ದಕ್ಕೆ ಪ್ರತಿಯಾಗಿ ಜಮೀನ್ದಾರರಿಗೆ ನೀಡಬೇಕೆಂದು ಗೊತ್ತುಮಾಡಿದ ಪರಿಹಾರ ಸೂತ್ರ ಎಲ್ಲ ರಾಜ್ಯಗಳಲ್ಲೂ ಒಂದೇ ರೀತಿಯಾಗಿರಲಿಲ್ಲ. ಅಸ್ಸಾಂ, ಬಿಹಾರ, ಒರಿಸ್ಸ, ಮದ್ಯಪ್ರದೇಶ-ಈ ರಾಜ್ಯಗಳಲ್ಲಿ ಜಮೀನ್ದಾರನ ನಿವ್ವಳ ವರಮಾನವೇ ಪರಿಹಾರಧನ ನಿಷ್ಕರ್ಷೆಗೆ ಆಧಾರ. ಉತ್ತರ ಪ್ರದೇಶದಲ್ಲಿ ನಿವ್ವಳ ಆಸ್ತಿಯ ಆಧಾರದ ಮೇಲೆ ಇದನ್ನು ನಿಷ್ಕರ್ಷಿಸಲಾಯಿತು. ಮದ್ರಾಸಿನಲ್ಲಿ ಮೂಲವಾರ್ಷಿಕ ಮೊಬಲಗನ್ನು ಆಧಾರವಾಗಿ ಇಟ್ಟುಕೊಳ್ಳಲಾಗಿತ್ತು. ನಿವ್ವಳ ವರಮಾನ, ಮೂಲವಾರ್ಷಿಕ ಮೊಬಲಗು ಅಥವಾ ನಿವ್ವಳ ಆಸ್ತಿಯ ಒಂದು ನಿರ್ದಿಷ್ಟ ಗಣಕವನ್ನು ಪರಿಹಾರಧನವಾಗಿ ನಿಷ್ಕರ್ಷಿಸಲಾಯಿತು. ಜಮೀನ್ದಾರರ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳುವುದಕ್ಕೂ ಪರಿಹಾರಧನ ನಿಷ್ಕರ್ಷೆ ಹಾಗೂ ಪಾವತಿಗೂ ಇದ್ದ ನಾನಾ ಸಂವೈಧಾನಿಕ ತೊಡಕುಗಳನ್ನು ನಿವಾರಿಸಲು 1951, 1955 ಮತ್ತು 1964-65ರಲ್ಲಿ ಸಂವಿಧಾನಕ್ಕೆ ತಿದ್ದುಪಡಿಗಳನ್ನು ಮಾಡಲಾಯಿತು. ಪರಿಹಾರಧನದ ಒಟ್ಟು ಮೊಬಲಗು ಸುಮಾರು ರೂ.641 ಕೋಟಿ ಎಂದು ಅಂದಾಜು ಮಾಡಲಾಗಿದೆ. ಜಮೀನ್ದಾರಿ ರದ್ದಿನಿಂದಾಗಿ ಭೂಸುಧಾರಣೆಯ ಮುಂದಿನ ಹಂತಗಳು ಸುಸೂತ್ರವಾಗಲು ಸಹಾಯವಾಯಿತು.          *